ಹೆಡಿನ್‍ಬರ್ಗ್ ಮಾನವ - 
	ಸುಮಾರು ನಾಲ್ಕುವರೆ ಲಕ್ಷ ವರ್ಷಗಳ ಹಿಂದೆ ಜೀವಿಸಿದ್ದ ಆದಿಮಾನವ. ಈ ಮಾನವನ ಪಳೆಯುಳಿಕೆಗಳು ಜರ್ಮನಿಯ ಹೆಡಿನ್‍ಬರ್ಗ್ ನಗರದ ಸಮೀಪ ಮೆಹೊರ್ ಎಂಬ ಸ್ಥಳದ ನೆಲದಡಿಯಲ್ಲಿ ಸು.24 ಮೀ ಆಳದಲ್ಲಿ ಸಿಕ್ಕಿವೆ. ಈ ನೆಲೆಯನ್ನು ಒಟೊ ಶ್ಯೂಟನ್ ಸ್ಯಾಕ್ ಪತ್ತೆಹಚ್ಚಿದ(1907). ಇಲ್ಲಿ ಸಿಕ್ಕ ಪಳೆಯುಳಿಕೆಗಳೆಂದರೆ ದವಡೆಯ ಮೂಳೆ ಮತ್ತು ಹಲ್ಲುಗಳು. ಇದನ್ನು ಹೆಡಿನ್ ಬರ್ಗ್ ದವಡೆಯೆಂದೂ ಕರೆಯುತ್ತಾರೆ. 

	ಈ ಬೃಹತ್ ದವಡೆಯು ಆಂಥ್ರೊಪಾಯ್ಡ್‍ಗೆ ಸೇರಿರಬಹುದಾಗಿದ್ದರೂ ಹಲ್ಲುಗಳು ಮಾತ್ರ ಮನುಷ್ಯನ ಹಲ್ಲುಗಳನ್ನು ಹೋಲುತ್ತವೆ. ಹೆಡಿನ್‍ಬರ್ಗ್ ಮಾನವ ನಿಯೋಡ್ರಾಥಾಲ್ ಮಾನವನಿಗಿಂತ ಪ್ರಾಚೀನನಿರಬಹುದೆಂದು ಭಾವಿಸಲಾಗಿದೆ. ಈ ಮಾನವ ವಾನರ ರೀತಿಯ ಜೀವಿಯಾಗಿದ್ದ. ಪಿಥಿಕಾಂಥ್ರೊಪಸ್ ಮತ್ತು ಸಿನಾಂಥ್ರೊಪಸ್ ಶ್ರೇಣಿಗಳು ಹೆಡಿನ್ ಬರ್ಗ್ ಮಾನವನಿಗಿಂತ ಪ್ರಾಚೀನವೆಂದು ಇತ್ತೀಚಿನ ಸಂಶೋಧನೆಗಳು ದೃಢಪಡಿಸಿವೆ. ಆದರೆ ಆದಿ ಮಾನವನ ಬಗ್ಗೆ ಹೊಸ ಹೊಸ ಅನ್ವೇಷಣೆಗಳು ನಡೆದಂತೆಲ್ಲ ಹೊಸ ವಿಚಾರಗಳು ಹಳೆಯ ವಿಚಾರಗಳನ್ನು ಪುನರ್‍ಪರಿಶೀಲನೆಗೆ ಒಳಪಡಿಸುತ್ತಿವೆ. ದಕ್ಷಿಣ ಆಫ್ರಿಕದ ಸಲ್‍ಡಾನ ಎಂಬಲ್ಲಿ ಹೆಡಿನ್‍ಬರ್ಗ್ ಮಾನವನ ದವಡೆಯ ರೀತಿಯ ಮೂಳೆಯ ತುಂಡು ಸಿಕ್ಕಿದೆ (1955). ಆದರೆ ಇದು ಹೆಡಿನ್‍ಬರ್ಗ್ ದವಡೆಯಷ್ಟು ಪ್ರಾಚೀನವಲ್ಲ. ಇದು ಸುಮಾರು ಮೂರುವರೆ ಲಕ್ಷ ವರ್ಷಗಳಷ್ಟು ಹಳೆಯದು. ಹಿಂದೆ ಅಲ್ಜೀರಿಯದ ಟೆರ್ನಿಪೇನ್ ಎಂಬಲ್ಲಿ ಪ್ರಾಚೀನ ಮಾನವನ ಮೂಳೆಗಳು ಸಿಕ್ಕಿದ್ದು ಇವುಗಳ ಜೊತೆಯಲ್ಲಿ ಚೆಲೇಯನ್ ಉಪಕರಣಗಳೂ ದೊರೆತಿವೆ. ಈ ಪಳೆಯುಳಿಕೆಯನ್ನು ಮಾನವಶಾಸ್ತ್ರಜ್ಞರು ಅಟ್ಲಾಂಥ್ರೊಪಿ ಎಂದು ಹೆಸರಿಸಿದ್ದಾರೆ. ಈ ರೀತಿಯ ಚೆಲೇಯನ್ ಉಪಕರಣಗಳು ಹೆಡಿನ್‍ಬರ್ಗ್ ಮಾನವನ ಜೊತೆಯಲ್ಲೂ ದೊರೆತಿವೆ. ಹೆಡಿನ್‍ಬರ್ಗ್ ಮಾನವನ ದವಡೆಯನ್ನು ವಿವಿಧ ಮಾನವ ತಲೆಬುರುಡೆಗಳೊಂದಿಗೆ ಹೋಲಿಸಿ ವಿಶ್ಲೇಷಿಸಲಾಗಿದೆ. ಇಂದಿನ ಎಸ್ಕಿಮೋ ಜನರ ತಲೆಬುರುಡೆ ಹೆಡಿನ್‍ಬರ್ಗ್ ಮಾನವನ ದವಡೆಯನ್ನು ಹೋಲುತ್ತದೆ ಎಂಬ ಅಭಿಪ್ರಾಯವೂ ಇದೆ. ದಕ್ಷಿಣ ಫೆಸಿಪಿಕ್ ಸಾಗರದ ಒಂದು ದ್ವೀಪದ ಸಂಪೂರ್ಣ ಜನ ಸಮೂಹದ ಲಕ್ಷಣ ಹೆಡಿನ್ ಬರ್ಗ್ ಮಾನವನ ಪಳೆಯುಳಿಕೆಯನ್ನು ಹೋಲುತ್ತದೆಂಬ ವಾದವೂ ಇದೆ.				
		(ಒ.ಪಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ